ಚಟರ್ಜಿ, ಕಾಳೀಪ್ರಸನ್ನ-
1863-1919. ಭಾರತದ ಒಬ್ಬ ಪತ್ರಿಕೋದ್ಯಮಿ, ರಾಷ್ಟ್ರಪ್ರೇಮಿ, ಸಮಾಜಸುಧಾರಕ; ಸಂಗೀತ ಚಿತ್ರಕಲೆಗಳಲ್ಲಿ ಪರಿಣತರು, ಜನ್ಮತಃ ಬಂಗಾಲಿ; ಪಂಜಾಬಿನಲ್ಲಿ ನೆಲಸಿ, ಭಾಷೆ, ಉಡುಪು, ವರ್ತನೆಗಳಲ್ಲಿ ಪಂಜಾಬಿಯೆಂದೇ ಇತರರು ಭಾವಿಸುವ ಮಟ್ಟಿಗೆ ಅಲ್ಲಿಯ ಜನಜೀವನದಲ್ಲಿ ತಾದಾತ್ಮ್ಯ ಸಾಧಿಸಿದರು. 1863ರ ಮಾರ್ಚ್ 1ರಂದು ಜನನ. ತಂದೆ ಹರಿಮೋಹನರು ಬಂಗಾಳದ ಅಶ್ವದಳದಲ್ಲಿ ಅಧಿಕಾರಿ. ಜಲಪೈಗುರಿಯಲ್ಲಿ ವಾಸ. ತಾಯಿ ದಕ್ಷಿಣಾದೇವಿ. ಇಬ್ಬರೂ ಶ್ರದ್ಧಾನ್ವಿತ ಹಿಂದೂಗಳು. ತಂದೆ ಭಾರತದ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ಮಗನೂ ತಂದೆಯಂತೆ ಆದರು, ಕಾಳೀಪ್ರಸನ್ನರು ಹುಟ್ಟಿದ ಕೆಲವು ವರ್ಷಗಳ ಅನಂತರ ಹರಿಮೋಹನರು ಲಾಹೋರಿನಲ್ಲಿ ಉದ್ಯೋಗ ಸಂಪಾದಿಸಿ, ಸಂಸಾರದೊಂದಿಗೆ ಅಲ್ಲಿ ನೆಲಸಿದರು. ಕಾಳೀಪ್ರಸನ್ನರು ಪಂಜಾಬಿನಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿದರು. ಅವರು ಲಾಹೋರ್ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರ ತಾಯಿ ಮರಣಹೊಂದಿದರು. ಕೌಟುಂಬಿಕ ತೊಂದರೆಗಳಿಂದಾಗಿ ಅವರ ಶಿಕ್ಷಣ ಅಷ್ಟಕ್ಕೇ ನಿಂತಿತು. ಆದರೆ ಕಾಳೀಪ್ರಸನ್ನರು ನಾನಾ ವಿಷಯಗಳ ಅಧ್ಯಯನದಲ್ಲಿ ನಿರತರಾದರು. ತಾಯಿಯ ಮರಣದ ದುಃಖ ಮತ್ತು ಲಾಹೋರಿನ ಕಾಳೀದೇವಾಲಯದ ಸ್ವಾಮಿ ಕೇಶವಾನಂದರ ಪ್ರಭಾವಗಳಿಂದಾಗಿ ಅವರು ಮನೆ ತೊರೆದು ಸಂನ್ಯಾಸ ಜೀವನ ನಡೆಸತೊಡಗಿದರು. ಸ್ವಲ್ಪ ಕಾಲದ ಅನಂತರ ಅವರ ತಂದೆ ಮಗನ ಮನಸ್ಸನ್ನು ಪ್ರಾಪಂಚಿಕ ವಿಚಾರಗಳತ್ತ ತಿರುಗಿಸಿ ಅವರನ್ನು ಮನೆಗೆ ಕರೆತಂದರು. 1894ರಲ್ಲಿ ಅವರು ಅನ್ನಪೂರ್ಣಾ ದೇವಿಯನ್ನು ವಿವಾಹವಾದರು.

ಕಾಳೀಪ್ರಸನ್ನರು ಲಾಹೋರಿನ ಸಿವಿಲ್ ಮತ್ತು ಮಿಲಿಟರಿ ಗೆಜೆಟ್ ಪತ್ರಿಕೆಯ ಭಾಷಾಂತಕರಕಾರರಾಗಿ ಪತ್ರಿಕೋದ್ಯಮ ಜೀವನವನ್ನಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧಾರ್ಮಿಕ, ಸಾಮಾಜಿಕ, ಸಾರ್ವಜನಿಕ ಸಂಸ್ಥೆಗಳ ಸಂಪರ್ಕ ಉಂಟಾಯಿತು. ಆರ್ಯ ಸಮಾಜದೊಂದಿಗೆ ಸಂಬಂಧ ಬೆಳೆಯಿತು. ವಕ್ತøತ್ವ ಕಲೆ, ಪತ್ರಿಕೋದ್ಯಮದ ಸಾಮಥ್ರ್ಯ, ಸಾರ್ವಜನಿಕ ವಿಚಾರಗಳಲ್ಲಿ ಆಸಕ್ತಿ-ಇವುಗಳಿಂದಾಗಿ ಅವರಿಗೆ ಖ್ಯಾತಿ ಬಂತು. ಅವರು ಟ್ರಿಬ್ಯೂನ್ ಪತ್ರಿಕೆಯ ಸಂಪಾದಕೀಯ ವಿಭಾಗವನ್ನು ಸೇರಿದರು. ಅದರ ಸಂಪಾದಕರಾಗಿದ್ದ ಗೋರಕನಾಥ ಚಟರ್ಜಿಯವರಿಗೆ ಅವರಲ್ಲಿ ವಿಶೇಷವಾದ ಪ್ರೀತಿ. ಕಾಳೀಪ್ರಸನ್ನರು ಸುಮಾರು ಎರಡು ದಶಕಗಳ ಕಾಲ ಆ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದರು. ಅವರ ವರದಿಗಳೂ ಟೀಕೆ ಟಿಪ್ಪಣಿಗಳೂ ತುಂಬ ಜನಪ್ರಿಯವಾದವು. 1905ರಲ್ಲಿ ಕಾಳೀಪ್ರಸನ್ನರು ಟ್ರಿಬ್ಯೂನ್ ಪತ್ರಿಕೆಯನ್ನು ಬಿಟ್ಟು ತಮ್ಮದೆ ಆದ ಲೈಟ್ ಎಂಬ ಸಾಪ್ತಾಹಿಕವನ್ನು ಪ್ರಾರಂಭಿಸಿದರು. ಮುಂದೆ ಇದು ದಿನಪತ್ರಿಕೆಯಾಯಿತು. ಲಾಲಾ ಲಜಪತರಾಯರೇ ಮುಂತಾದ ಹಲವರು ಪತ್ರಿಕೆಯನ್ನು ಮೆಚ್ಚಿದರು. ಆದರೆ ಎರಡು ವರುಷಗಳಾಗುವಷ್ಟರಲ್ಲಿ ಆರ್ಥಿಕ ತೊಂದರೆಗಳಿಂದಾಗಿ ಅದನ್ನು ನಿಲ್ಲಿಸಬೇಕಾಯಿತು. ಮರುವರ್ಷ ಶಿಶಿರಕುಮಾರ ಘೋಷರ ಆಮಂತ್ರಣದ ಮೇರೆಗೆ ಕಲ್ಕತ್ತದ ಅಮೃತ ಬಜಾರ್ ಪತ್ರಿಕೆಯ ಸಂಪಾದಕೀಯ ವಿಭಾಗ ಸೇರಿದರು. ಐದು ವರ್ಷಗಳ ಆನಂತರ ಈ ಪತ್ರಿಕೆಯಿಂದ ಹೊರಬಿದ್ದರು. ಆದರೆ ಘೋಷರೊಂದಿಗಿನ ಸಂಬಂಧ ಉಳಿದುಬಂತು. ಮತ್ತೆ ಅವರು ಲಾಹೋರಿಗೆ ಮರಳಿ ಪಂಜಾಬಿನ ಇಂಗ್ಲಿಷ್ ದೈನಿಕವೊಂದರ ಸಂಪಾದಕರಾದರು. 1911ರಲ್ಲಿ ವಾರಾಣಸಿಗೆ ಹೋಗಿ ಭಾರತ ಧರ್ಮ ಮಹಾಮಂಡಲದ ಮುಖಪತ್ರದ ಸಂಪಾದಕರಾದರು. ಸ್ವಲ್ಪಕಾಲ ಡೆಹರಾಡೂನಿನಲ್ಲಿ ಕಾಸ್ಮೊಪಾಲಿಟನ್ ಪತ್ರಿಕೆಯ ಸಂಪಾದಕರಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕರಾಗಲು ಆಹ್ವಾನ ಬಂತು. ಆದರೆ ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. 1918ರಲ್ಲಿ ಶಾಂತಿನಿಕೇತನವನ್ನು ಸಂದರ್ಶಿಸಿ ಎರಡು ಉಪನ್ಯಾಸ ನೀಡಿ, ರವೀಂದ್ರರೇ ಮುಂತಾಗಿ ಹಲವರ ಮೆಚ್ಚುಗೆ ಗಳಿಸಿದರು. ಅಲ್ಲಿ ಅವರ ಶಿಕ್ಷಕರಾಗಬೇಕೆಂಬುದು ರವೀಂದ್ರರ ಅಪೇಕ್ಷೆಯಾಗಿತ್ತು. ಆದರೆ ಅವರ ಇಚ್ಚೆ ಪೂರೈಸಲಿಲ್ಲ. 1919ರ ನವೆಂಬರ್ 12ರಂದು ಕಾಳೀಪ್ರಸನ್ನ ಚಟರ್ಜಿಯವರು ತೀರಿಕೊಂಡರು. ಕಾಳೀಪ್ರಸನ್ನರು ಪಂಜಾಬಿನ ರಾಷ್ಟ್ರೀಯ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಸಂಸ್ಥೆಯನ್ನು ಸಂಘಟಿಸುವಲ್ಲಿ ನೆರವು ನೀಡಿದರು. ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿ ಸಮಾಜಸುಧಾರಣೆಗೂ ಯತ್ನಿಸಿದರು. ಅವರು ಬರೆದ ಸಿಖ್ ಸಮ್ರಾಟ್ ಓ ಸಾತಿರ್ ಅಭಿಶಾಪ್ ಎಂಬ ಕಾದಂಬರಿಯ ಅವರ ಮರಣಾನಂತರ ಬಂಗಾಲಿಯ ಸಾಹಿತ್ಯ ಪತ್ರಿಕೆ ಪರಿಚಯದಲ್ಲಿ ಧಾರವಾಹಿಯಾಗಿ ಪ್ರಕಟವಾಯಿತು.
(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ